Breaking
31 Oct 2025, Fri

ಜಿಗಣಿಯಲ್ಲಿ ಕಾಣಿಸಿಕೊಂಡಿದ್ದ ಚಿರತೆ ಸೆರೆ ಹಿಡಿದ ಅರಣ್ಯ ಇಲಾಖೆ

ಆನೇಕಲ್ ತಾಲೂಕಿನ ಜಿಗಣಿಯಲ್ಲಿ ಆಹಾರ ಅರಸಿ ಕಾಡಿನಿಂದ ನಾಡಿಗೆ ಬಂದ ಚಿರತೆಯನ್ನು ಕೊನೆಗೂ ಅರಣ್ಯ ಇಲಾಖೆ ಸೆರೆ ಹಿಡಿದಿದ್ದಾರೆ. ಇಂದು ಮುಂಜಾನೆ 8 ಗಂಟೆ ವೇಳೆಗೆ ಜಿಗಣಿಯ ಕುಂಟ್ಲು ರೆಡ್ಡಿ ಬಡಾವಣೆಯ ವೆಂಕಟೇಶ್ ಎಂಬುವವರ ಮನೆಗೆ ಚಿರತೆ ನುಗ್ಗಿದೆ. ವೆಂಕಟೇಶ್ ಹಾಗೂ ವೆಂಕಟಲಕ್ಷ್ಮಿ ದಂಪತಿ‌ ಮುಂಜಾನೆ ಕಾಫಿ ಕುಡಿಯುವ ವೇಳೆ ಅವರ ಮುಂದೆಯೇ ಚಿರತೆ ಮನೆಗೆ ಬಂದಿದೆ.

ಈ ವೇಳೆ ಆತಂಕಕ್ಕೆ ಒಳಗಾಗದೇ ದಂಪತಿಗಳು ಚಿರತೆಯನ್ನ ಮನೆಯಲ್ಲಿ ಕೂಡಿ ಹಾಕಿ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ ಸ್ಥಳಕ್ಕೆ ಬಂದ ಅರಣ್ಯ ಇಲಾಖೆ ಸಿಬ್ಬಂದಿಗಳು 5 ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಚಿರತೆಯನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

ಈ ಕುರಿತು ಮಾತನಾಡಿದ ಮನೆ ಮಾಲೀಕರಾದ ವೆಂಕಟೇಶ್ ಹಾಗೂ ವೆಂಕಟಲಕ್ಷ್ಮಿ ಇದೇ ಮೊದಲ ಬಾರಿಗೆ ಚಿರತೆ ಮನೆ ಬಳಿ ಕಾಣಿಸಿಕೊಂಡಿದೆ. ಭಯದಿಂದಲೇ ನಾವು ಚಿರತೆಯನ್ನು ಮನೆಯಲ್ಲೇ ಕೂಡಿಹಾಕಿ ಹೊರಬಂದು ಸ್ಥಳೀಯರಿಗೆ ಮಾಹಿತಿ ನೀಡಿದ್ದೇವೆ.

ಬಳಿಕ ಅರಣ್ಯ ಇಲಾಖೆ ಚಿರತೆಯನ್ನು ಯಶಸ್ವಿಯಾಗಿ ಸೆರೆಹಿಡಿದಿದ್ದಾರೆ ಎಂದರು, ಪುರಸಭಾ ಸದಸ್ಯ ಪುನೀತ್ ಮಾತನಾಡಿ 8 ಗಂಟೆ ವೇಳೆಗೆ ನನ್ನ ವಾರ್ಡ್ ನಲ್ಲಿ ಚಿರತೆ ಬಂದಿರುವ ಬಗ್ಗೆ ಮಾಹಿತಿ ಪಡೆದು ಸ್ಥಳಕ್ಕೆ ಬಂದೆ. ಆದರೆ ದಂಪತಿಗಳು ಸಮಯ ಪ್ರಜ್ಞೆ ಮೆರೆದು ಚಿರತೆಯನ್ನು ಮನೆಯಲ್ಲಿ ಕೂಡಿ ಹಾಕಿದ್ದಾರೆ.

ಇದರಿಂದ ಬಾರಿ ಅನಾಹುತ ತಪ್ಪಿದಂತಾಗಿದೆ. ಕೂಡಲೇ ಅರಣ್ಯ ಇಲಾಖೆಗೆ ಸಿಬ್ಬಂದಿಗಳು ಸ್ಥಳಕ್ಕೆ ಬಂದು ಚಿರತೆಗೆ ಅರವಳಿಕೆಯ ಚುಚ್ಚುಮದ್ದು ನೀಡಿ ಸೆರೆಹಿಡಿದಿದ್ದಾರೆ. ವೆಂಕಟೇಶ್ ದಂಪತಿಗಳು ಇಂತಹ ಪರಿಸ್ಥಿತಿಯಲ್ಲೂ ದೃತಿಗೆಡದೇ ಚಿರತೆಯನ್ನ ಕೂಡಿ ಹಾಕಿರುವುದು ನಿಜಕ್ಕೂ ಶ್ಲಾಘನೀಯ ಎಂದರು.

ಕಲ್ಕೆರೆ ಅರಣ್ಯ ಅಧಿಕಾರಿಗಳಾದ ಗಣೇಶ್ ರವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಚಿರತೆಯನ್ನು ಯಶಸ್ವಿಯಾಗಿ ಸೆರೆಹಿಡಿದು ಬನ್ನೆರುಘಟ್ಟ ಮೃಗಾಲಯಕ್ಕೆ ಚಿಕಿತ್ಸೆಗಾಗಿ ರವಾನೆ ಮಾಡಲಾಗಿದೆ.

Leave a Reply