Breaking
18 Jul 2026, Sat

ಆನೇಕಲ್: ಆರೋಪಿಗಳನ್ನು ಬಂಧಿಸದಿದ್ದರೆ ಗೃಹ ಇಲಾಖೆಗೆ ಮುತ್ತಿಗೆ- ದಲಿತ ಮುಖಂಡ ಸಂದೇಶ್ ಎಚ್ಚರಿಕೆ.

ಆನೇಕಲ್ : ತಾಲ್ಲೂಕಿನ ಜಿಗಣಿ ಸಮೀಪವಿರುವ ನಿರ್ಮಾಣ್ ಶೆಲ್ಟರ್ಸ್ ಕಂಪನಿಯ ಮಾಲೀಕರಾದ ಲಕ್ಷ್ಮೀನಾರಾಯಣ್, ಶಶಿ ಪಾಟೀಲ್ ಮತ್ತು ನಿರ್ದೇಶಕಿ ಸುಷ್ಮಾ ಮೂರ್ತಿ ಅವರನ್ನು ಕೂಡಲೇ ಬಂಧಿಸಬೇಕು. ಇಲ್ಲವಾದರೆ ಗೃಹ ಇಲಾಖೆ ಕಚೇರಿಗೆ ಮುತ್ತಿಗೆ ಹಾಕಲಾಗುವುದು ಎಂದು ದಲಿತ ಮುಖಂಡ ಸಂದೇಶ್ ಅವರು ಗಂಭೀರ ಎಚ್ಚರಿಕೆ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಆರೋಪ

ಈ ಕುರಿತು ಆನೇಕಲ್ ತಾಲ್ಲೂಕು ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಿರ್ಮಾಣ್ ಶೆಲ್ಟರ್ಸ್ ನ ಮಾಲೀಕರು, ನಿರ್ದೇಶಕರು ಹಾಗೂ ಕಾನೂನು ಸಲಹೆಗಾರರ ಮೇಲೆ ಜಾತಿ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಾಗಿ ಇಪ್ಪತ್ತೊಂದು ದಿನಗಳು ಕಳೆದಿವೆ. ಆದರೂ ಸಹ ಜಿಗಣಿ ಪೊಲೀಸರು ಆರೋಪಿಗಳನ್ನು ಬಂಧಿಸದೆ ಮೀನಮೇಷ ಎಣಿಸುತ್ತಿದ್ದಾರೆ. ಪೊಲೀಸರ ಈ ನಿರ್ಲಕ್ಷ್ಯದ ವಿರುದ್ಧ ಕಾನೂನು ಹೋರಾಟ ನಡೆಸಲಾಗುವುದು ಎಂದು ಸಂದೇಶ್ ತಿಳಿಸಿದರು.

ಪ್ರಕರಣದ ಹಿನ್ನೆಲೆ

ಒಂದು ತಿಂಗಳ ಹಿಂದೆ ಕಂಪನಿಯ ಮಾಜಿ ಸಿಬ್ಬಂದಿಯೊಬ್ಬರು ಕಂಪನಿಯ ಮಾಲೀಕರ ಮೇಲೆ ಜಾತಿ ನಿಂದನೆ, ಥಳಿಸುವುದು ಮತ್ತು ಬಲವಂತವಾಗಿ ರಾಜೀನಾಮೆ ಪಡೆಯುವಂತಹ ಗಂಭೀರ ಆರೋಪಗಳನ್ನು ಮಾಡಿ ದೂರು ದಾಖಲಿಸಿದ್ದರು. ದೂರಿನಲ್ಲಿ, ತನಗೆ ಹತ್ತು ವರ್ಷಗಳ ಪರಿಹಾರ ಕೇಳಿದಾಗ ಜಾತಿ ನಿಂದನೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಲಾಗಿದೆ ಎಂದು ಆರೋಪಿಸಿದ್ದರು. ಅಲ್ಲದೆ, ನಿಸರ್ಗ ಲೇಔಟ್ ನಲ್ಲಿರುವ ತಮ್ಮ ಮನೆಯಿಂದ ಬಲವಂತವಾಗಿ ಹೊರಹಾಕಿದ್ದಾರೆ ಎಂದೂ ದೂರಿನಲ್ಲಿ ನಮೂದಿಸಿದ್ದರು. ಈ ದೂರನ್ನು ಆಧರಿಸಿ ಜಿಗಣಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.

ಪೊಲೀಸ್ ನಿರ್ಲಕ್ಷ್ಯಕ್ಕೆ ಪ್ರತಿಭಟನೆಯ ಎಚ್ಚರಿಕೆ

ಪ್ರಕರಣ ದಾಖಲಾಗಿದ್ದರೂ ಪೊಲೀಸರು ಆರೋಪಿಗಳ ವಿರುದ್ಧ ಯಾವುದೇ ಕ್ರಮ ಜರುಗಿಸದೆ ಇರುವುದು ಸಮಾಜದಲ್ಲಿ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಈ ಕುರಿತು ಅಸಮಾಧಾನ ವ್ಯಕ್ತಪಡಿಸಿದ ಸಂದೇಶ್ ಮತ್ತು ದಲಿತ ಸಂಘಟನೆಗಳ ಮುಖಂಡರು, ಕೂಡಲೇ ಆರೋಪಿಗಳನ್ನು ಬಂಧಿಸಿ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿದರು. ಇಲ್ಲವಾದರೆ, ದಲಿತ ಮತ್ತು ಪ್ರಗತಿಪರ ಸಂಘಟನೆಗಳು ಒಗ್ಗೂಡಿ ರಾಜ್ಯ ಗೃಹ ಇಲಾಖೆಯ ಕಚೇರಿ ಮುಂದೆ ಬೃಹತ್ ಪ್ರತಿಭಟನೆ ಮತ್ತು ಮುತ್ತಿಗೆಯನ್ನು ಹಮ್ಮಿಕೊಳ್ಳಲಿವೆ ಎಂದು ಎಚ್ಚರಿಕೆ ನೀಡಿದ್ದಾರೆ. ಈ ಪ್ರಕರಣವು ಈಗ ರಾಜಕೀಯ ಮತ್ತು ಸಾಮಾಜಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಈ ಸಂದರ್ಭದಲ್ಲಿ ಅಂಬೇಡ್ಕರ್ ಸೇವಾ ಸಮಿತಿಯ ಪದಾಧಿಕಾರಿಗಳಾದ ನಾಗೇಶ್, ಕುಮಾರ್, ಚಲಪತಿ, ಗೋವಿಂದು, ಮಹೇಶ್, ಕೊಪ್ಪ ರಮೇಶ್, ಸುನೀಲ್ ಮತ್ತಿತರರು ಉಪಸ್ಥಿತರಿದ್ದರು.

Leave a Reply