ಆನೇಕಲ್ ತಾಲೂಕಿನ ಸಿಂಗೇನ ಅಗ್ರಹಾರ ಗ್ರಾಮದಲ್ಲಿ ಇಂದಿರಾಗಾಂಧಿ ಮುಕ್ತ ವಿಶ್ವವಿದ್ಯಾಲಯ ವತಿಯಿಂದ 38 ನೇ ಘಟಿಕೊತ್ಸವ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು. ತುಮಕೂರು ವಿಶ್ವವಿದ್ಯಾಲಯದ ಉಪಕುಲಪತಿ ವೆಂಕಟೇಶ್ವರಲು ಹಾಗೂ ಇಂದಿರಾ ಗಾಂಧಿ ಮುಕ್ತ ವಿಶ್ವವಿದ್ಯಾಲಯದ ಪ್ರಾದೇಶಿಕ ನಿರ್ದೇಶಕ ಷಣ್ಮುಗಂ ವಿದ್ಯಾರ್ಥಿಗಳಿಗೆ ಪದವಿ ಪ್ರಧಾನ ಮಾಡಿದರು.
300 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಇಂದು ಪದವಿ ಪ್ರಧಾನ ಮಾಡಲಾಯಿತು. ದೆಹಲಿಯ ಇಂದಿರಾಗಾಂಧಿ ಮುಕ್ತ ವಿಶ್ವವಿದ್ಯಾಲಯದ ಪ್ರಧಾನ ಕಚೇರಿಯಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಸಾವಿರಾರು ವಿದ್ಯಾರ್ಥಿಗಳು ಪದವಿ ತಮ್ಮದಾಗಿಸಿಕೊಂಡರು. ಈ ಕುರಿತು ಮಾತನಾಡಿದ ತುಮಕೂರು ವಿಶ್ವವಿದ್ಯಾಲಯದ ಉಪಕುಲಪತಿ ವೆಂಕಟೇಶ್ವರಲು ದೇಶದ 48 ಪ್ರಾದೇಶಿಕ ವಲಯದಲ್ಲಿ ಇಂದು ಘಟಿಕೋತ್ಸವ ಆಯೋಜನೆ ಮಾಡಲಾಗಿದ್ದು ಸಾವಿರಾರು ವಿದ್ಯಾರ್ಥಿಗಳು ಪದವಿ ಪಡೆದಿದ್ದಾರೆ. ಬೆಂಗಳೂರು ಪ್ರಾದೇಶಿಕ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ 300 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪದವಿ ಪಡೆದುಕೊಂಡಿದ್ದಾರೆ. 5 ಮಂದಿ ಚಿನ್ನದ ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಯಾವುದೇ ವಯಸ್ಸಿನ ಇತಿಮಿತಿ ಇಲ್ಲದೇ 60 ವರ್ಷಕ್ಕೂ ಮೇಲ್ಪಟ್ಟ ಹಲವರು ಪದವಿ ಪಡೆದುಕೊಂಡಿರುವುದು ವಿಶೇಷವಾಗಿದೆ ಎಂದರು.
ಬಳಿಕ ಮಾತನಾಡಿದ ಇಂದಿರಾ ಗಾಂಧಿ ವಿಶ್ವವಿದ್ಯಾಲಯದ ಪ್ರಾದೇಶಿಕ ನಿರ್ದೇಶಕ ಷಣ್ಮುಗಂ ಬೆಂಗಳೂರು ಪ್ರಾದೇಶಿಕ ವಲಯದಲ್ಲಿ ಉದ್ಯೋಗದ ಜೊತೆ ಜೊತೆಗೆ ನೂರಾರು ಮಂದಿ ಉನ್ನತ ಶಿಕ್ಷಣವನ್ನು ಪಡೆದು ಸ್ನಾತಕೋತ್ತರ ಪದವಿ ಪಡೆದುಕೊಂಡಿದ್ದಾರೆ. ಪ್ರತಿಯೊಬ್ಬರು ಶಿಕ್ಷಣವನ್ನು ಪಡೆಯುವ ಮೂಲಕ ದೇಶದ ಅಭಿವೃದ್ಧಿಯಲ್ಲಿ ಕೈ ಜೋಡಿಸಬಹುದಾಗಿದೆ ಈ ನಿಟ್ಟಿನಲ್ಲಿ ವಿಕಸಿತ ಭಾರತ ಪರಿಕಲ್ಪನೆ ಸಾಕಾರವಾಗಲಿದೆ ಎಂದರು.
ಚಿನ್ನದ ಪದಕ ಪಡೆದು ಮಾತನಾಡಿದ ವಿದ್ಯಾರ್ಥಿನಿ ಧನಲಕ್ಷ್ಮಿ ಬಿ.ಎಡ್ ಕೋರ್ಸ್ ನಲ್ಲಿ ಚಿನ್ನದ ಪದಕ ಪಡೆದಿರುವುದು ಖುಷಿ ತಂದಿದೆ. ಇಂದಿರಾ ಗಾಂಧಿ ವಿಶ್ವವಿದ್ಯಾಲಯದಲ್ಲಿ ಉತ್ತಮ ರೀತಿಯಲ್ಲಿ ಸ್ಪಂದನೆ ನೀಡಿದ್ದಾರೆ. ಎಲ್ಲಾ ಪ್ರಾಧ್ಯಾಪಕರು ಉತ್ತಮ ರೀತಿಯಲ್ಲಿ ಪಾಠ ಪ್ರವಚನಗಳನ್ನ ನೀಡಿದ ಪರಿಣಾಮ ನನಗೆ ಚಿನ್ನದ ಪದಕ ಲಭಿಸಿದೆ. ಹೀಗಾಗಿ ನನ್ನ ಎಲ್ಲಾ ಗುರುಗಳಿಗೆ ಈ ಸಂದರ್ಭದಲ್ಲಿ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು

