ಜ.19ರಂದು ನವದೆಹಲಿಯ ಇಂದಿರಾ ಗಾಂಧಿ
ಕ್ರೀಡಾಂಗಣದಲ್ಲಿ ನಡೆದ ಖೋ ಖೋ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ನೇಪಾಳ ತಂಡವನ್ನು 78-40 ಅಂತರದಲ್ಲಿ ಗೆದ್ದು ಬೀಗಿದ ಭಾರತ ಮಹಿಳಾ ತಂಡಕ್ಕೆ ದೇಶವ್ಯಾಪಿ ಅಭಿನಂದನೆಗಳು ವ್ಯಕ್ತವಾಗುತ್ತಿವೆ. ಫೈನಲ್ ಹಣಾಹಣಿಯಲ್ಲಿ ಅತ್ಯುತ್ತಮ ಆಲ್ ರೌಂಡ್ ಪ್ರದರ್ಶನ ನೀಡಿದ ರಾಜ್ಯದ ಮೈಸೂರಿನ ಯುವತಿ ಬಿ. ಚೈತ್ರಾಗೆ ಭಾರತೀಯರಿಂದ ವ್ಯಾಪಕ ಪ್ರಶಂಸೆ ಹಾಗೂ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿವೆಅಟ್ಯಾಕಿಂಗ್ ಹಾಗೂ ಡಿಫೆಂಡಿಂಗ್ ಎರಡರಲ್ಲೂ ಅದ್ಭುತ ಪ್ರದರ್ಶನ ತೋರಿದ ಗ್ರಾಮೀಣ ಪ್ರತಿಭೆ, ಐದು ನಿಮಿಷಗಳ ಕಾಲ ನೇಪಾಳ ವಿರುದ್ಧ ‘ಡ್ರಿಮ್ ರನ್’ ಓಡುವ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಮೈಸೂರು ಜಿಲ್ಲೆಯ ಟಿ.ನರಸೀಪುರ ತಾಲೂಕಿನ ಕುರುಬೂರು ಗ್ರಾಮದ ಬಿ. ಚೈತ್ರಾ, ಭಾರತವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರತಿನಿಧಿಸಿದ್ದಲ್ಲದೇ, ಅತ್ಯಂತ ಗಮನಾರ್ಹ ಪ್ರದರ್ಶನ ನೀಡಿದ್ದು ನೋಡುಗರ ಗಮನಸೆಳೆದಿದೆ. ಪುತ್ರಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡುತ್ತಿರುವುದು ಪೋಷಕರಲ್ಲಿ ಅತೀವ ಸಂತಸ ಉಂಟುಮಾಡಿದೆ.